ಡೇಲ್, ಹೆನ್ರಿ ಹ್ಯಾಲೆಟ್
1875-1968. ಇಂಗ್ಲೆಂಡಿನ ಜೀವ ವಿe್ಞÁನಿ. ಲಂಡನ್ನಿನಲ್ಲಿ ಜನನ (9-6-1875), ಕೇಂಬ್ರಿಜಿನಲ್ಲಿ ಮರಣ (24-7-1968). ಈ ಕೇಂಬ್ರಿಜ್ಜಿನಿಂದ ವೈದ್ಯ ಪದವಿಯನ್ನು ಪಡೆದ (1909) ಡೇಲನು ಶರೀರಕ್ರಿಯಾಶಾಸ್ತ್ರದಲ್ಲಿ ಮೂಲಭೂತ ಸಂಶೋಧನೆಗಳನ್ನು ನಡೆಸಿದ. ವೆಲ್‍ಕಮ್ ಶರೀರಕ್ರಿಯಾಶಾಸ್ತ್ರ ಸಂಶೋಧನಾಲಯದಲ್ಲಿ ನಿರ್ದೇಶಕ ಔಷಧಶಾಸ್ತ್ರಜ್ಞನಾಗಿ (1904) ಈತ ನಡೆಸಿದ ಮೊದಲ ಸಂಶೋಧನೆಗಳು ರೈ ಮೇಲೆ ಬೆಳೆವ ಕಚ್ಚಾ ಎರ್ಗಟ್ ಎಂಬ ಭೂಷ್ಟಿನಲ್ಲಿರುವ ರಾಸಾಯನಿಕಗಳು ಮತ್ತು ಅವುಗಳ ಪ್ರಭಾವಗಳನ್ನು ಕುರಿತದ್ದು. ಇವನ್ನೇ ಮುಂದುವರಿಸಿ ಇವನು ಶಸ್ತ್ರಕ್ರಿಯೆಯ ವೇಳೆ ಆಗುವ ಧಕ್ಕೆ ಮತ್ತು ಮರೆಹಾರಿಕೆಗಳಲ್ಲಿ (ಅನಫೈಲಾಕ್ಸಿಸ್) ಎರ್ಗಟ್ಟಿನಲ್ಲಿರುವ ಹಿಸ್ಟಮೀನಿನ ಪ್ರಭಾವವನ್ನು ಶೋಧಿಸಿದ. ಇವನು ಸಂಶೋಧನೆ ನಡೆಸಿದ ಇತರ ಕ್ಷೇತ್ರಗಳೆಂದರೆ ವಿಷಮಶೀತ ಜ್ವರ, ಮಲೇರಿಯ, ನರಗಳಲ್ಲಿ ಆ ವೇಗಗಳು ಸಾಗಣೆ ಆಗುವ ರಾಸಾಯನಿಕ ವಿಧಾನ, ಇತ್ಯಾದಿ, ಮೈಯ್ಯಲ್ಲಿ ನರಾವೇಗಗಳ ರಾಸಾಯನಿಕ ಸಾಗಣೆಗೆ ಕಾರಣವಾದ ಅಂತಸ್ರಾವವನ್ನು ತೋರಿಸಿಕೊಟ್ಟಿದ್ದಕ್ಕಾಗಿ ಡೇಲನಿಗೆ (ಜರ್ಮನಿಯ ಔಷಧಶಾಸ್ತ್ರಜ್ಞನಾದ ಆಟೊಲೊವಿಯೊಂದಿಗೆ) 1936ರಲ್ಲಿ ವೈದ್ಯ ಹಾಗೂ ಶರೀರಕ್ರಿಯಾ ವಿe್ಞÁನ ವಿಭಾಗದ ನೊಬೆಲ್ ಪಾರಿತೋಷಿಕ ಲಭಿಸಿತು. 1914ರಲ್ಲಿ ಡೇಲ್‍ನನ್ನು ಇಂಗ್ಲೆಂಡಿನ ವೈದ್ಯ ಸಂಶೋಧನ ಮಂಡಳಿಯ ಜೀವರಸಾಯನ ಹಾಗೂ ಔಷಧಶಾಸ್ತ್ರಗಳ ಇಲಾಖೆಯ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು. 1928-1942ರಲ್ಲಿ ಇವನು ಲಂಡನ್ನಿನ ಹ್ಯಾಂಪ್‍ಸ್ಟೆಡ್ಡಿನ ವೈದ್ಯ ಸಂಶೋಧನೆಯ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕನಾಗಿದ್ದ. ಇವನ ಹಿರಿಮೆಯನ್ನು ಲಕ್ಷಿಸಿ ಸರ್ಕಾರ 1932ರಲ್ಲಿ ಡೇಲ್‍ನಿಗೆ ಸರ್ ಪದವಿಯನ್ನು (ನೈಟ್‍ಹುಡ್) ನೀಡಿ ಗೌರವಿಸಿತು.
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ